ವೇದಗಳು
	ಅತ್ಯಂತ ಪುರಾತನ ಭಾರತೀಯ ಧಾರ್ಮಿಕ ಗ್ರಂಥಗಳು. ಇವನ್ನು ಗುಣಲಕ್ಷಣಾನುಸಾರ ಋಗ್ವೇದ (ನೋಡಿ- ಋಗ್ವೇದ) ಯಜುರ್ವೇದ, ಸಾಮವೇದ (ನೋಡಿ- ಸಾಮವೇದ) ಮತ್ತು ಅಥರ್ವವೇದ (ನೋಡಿ- ಅಥರ್ವವೇದ) ಎಂದು ವರ್ಗೀಕರಿಸಲಾಗಿದೆ. ವೇದ ಪದದ ಧಾತು ವಿದ್. ಆದ್ದರಿಂದ ಮಾನವನಿಗೆ ಜ್ಞಾನಬೀರುವ ಗ್ರಂಥರಾಶಿ ವೇದಗಳು ಎನ್ನಬಹುದು. ಕ್ರಿ.ಪೂ.ಸು. 1500ರಷ್ಟು ಪ್ರಾಚೀನ ಕಾಲದಲ್ಲಿ ಇವು ರಚನೆಗೊಂಡಿರ ಬೇಕೆಂದು ವಿದ್ವಾಂಸರ ಅಭಿಪ್ರಾಯ. 

	ಪ್ರಾಕೃತಿಕ ಸಂಪತ್ತು (ಅಂತೆಯೇ ಆಪತ್ತು ಕೂಡ) ಸಮೃದ್ಧವಾಗಿದ್ದ ಗಂಗಾಯಮುನಾ ನದೀತೀರಗಳಲ್ಲಿ ವಾಸಿಸುತ್ತಿದ್ದ ಮಹರ್ಷಿಗಳು ತಮಗೆ ಸಮಸ್ತ ಸೌಖ್ಯವನ್ನು ಅನುಗ್ರಹಿಸಿ ಗಂಡಾಂತರಗಳೆದುರು ರಕ್ಷಣೆ ಒದಗಿಸುತ್ತಿದ್ದ ಪ್ರಕೃತಿ ದೇವತೆಗೆ ಕೃತಜ್ಞತೆ ಸಲ್ಲಿಸಲು ಉದ್ಗರಿಸಿದ ಸ್ತೋತ್ರ ಅಥವಾ ಮಂತ್ರಗಳೇ ವೇದಗಳು. ಪ್ರತಿಯೊಂದು ಪ್ರಾಕೃತಿಕ ವರದಾನದ ಮೂಲದಲ್ಲಿ ಅವರು ಒಂದೊಂದು ದೇವತೆಯನ್ನು ಕಲ್ಪಿಸಿಕೊಂಡರು. ಬೆಳಕಿನ ಆಕರ ಸೂರ್ಯ ಸವಿತೃ, ಮಳೆದೇವತೆ ಪರ್ಜನ್ಯ, ಜಲದೇವತೆ ವರುಣ, ಮಿಂಚು ಸಿಡಿಲು ದೇವತೆ ಇಂದ್ರ, ಗಾಳಿದೇವತೆ ವಾಯು, ಬೆಳುದಿಂಗಳ ದೇವತೆ ಚಂದ್ರಮಸ್ಸು ಇತ್ಯಾದಿ. ಆ ಪ್ರಕೃತಿ ದೇವತೆಗಳ ಮೇಲೆ ತಮ್ಮ ಹತೋಟಿ ಏನೇನೂ ಇಲ್ಲದ್ದು ಅರಿವಾದಾಗ ಅವರನ್ನು ತಮಗೆ ಅನುಕೂಲಕರವಾಗಿರುವಂತೆ ಪ್ರಾರ್ಥಿಸಿದರು. ಇಂದಾದರೂ ನಮ್ಮ ಕೈಮೀರಿ ಹೋದ ವಿಷಯಗಳಲ್ಲಿ ನಮಗೆ ಪ್ರಾರ್ಥನೆಯೊಂದೇ ಶರಣಲ್ಲವೆ? ಆ ಪ್ರಾರ್ಥನಾಸಮೂಹವೇ ವೇದಗಳು. ಮೊದಲು ಪ್ರಾರ್ಥನೆಯೆಂದು ಆರಂಭವಾಗಿದ್ದು ಅಷ್ಟಕ್ಕೇ ನಿಲ್ಲಲಿಲ್ಲ. ಮಾನವ ಸ್ವಭಾವದಂತೆ, ತಮ್ಮ ಕೃತಜ್ಞತಾಭಾವಗಳನ್ನು ಆಯಾ ದೇವತೆಗೆ ಯುಕ್ತ ಕ್ರಿಯೆಗಳ ಮೂಲಕ ನಿವೇದಿಸಬೇಕೆಂದೆನಿಸಿತು. ಯಜ್ಞಗಳೆಂಬ ದೊಡ್ಡ ಪ್ರಕ್ರಿಯೆಗಳು ಹೀಗೆ ಆರಂಭವಾದುವು. ಇವುಗಳಿಗೆ ಪ್ರಾರ್ಥನಾಮ ಯಮಂತ್ರಗಳನ್ನೂ ಜೋಡಿಸಿದರು. ಸ್ತೋತ್ರದಲ್ಲಿಯೂ ಕೆಲವು ದೇವತೆಗಳನ್ನು ಹಾಡಿ ಸ್ತುತಿಸಿದರು. ಹೀಗೆ ಮಹರ್ಷಿಗಳ ಮಾನಸಿಕ ಅನುಭವಗಳನ್ನೇ ಮಂತ್ರ, ಸ್ತೋತ್ರ, ಯಜ್ಞ, ಗಾನ ಮುಂತಾದ ಕ್ರಿಯೆಗಳಾಗಿ ಅಳವಡಿಸಿ, ಅವನ್ನು ವಿಭಾಗಿಸಿ ಋಗ್ವೇದ, ಯಜುರ್ವೇದ, ಸಾಮವೇದಗಳೆಂಬ ಹೆಸರು ಕೊಟ್ಟರು. 

	ಇಂದು ಉಪಲಬ್ಧವಿರುವ ವೇದಗಳಲ್ಲಿ ಕೇವಲ ಸ್ತೋತ್ರರೂಪವಾದ ಮಂತ್ರಸಮೂಹಕ್ಕೆ ಋಗ್ವೇದ ಎಂದು ಹೆಸರು. ಇದರಲ್ಲಿರುವ ಕೆಲವು ಸ್ತೋತ್ರಗಳನ್ನು ಗಾನರೂಪವಾಗಿ ಹಾಡುವುದನ್ನು ಸಾಮವೇದವೆಂದು ಕರೆದರು. ಯಜ್ಞಕ್ರಿಯೆಗಳಲ್ಲಿ ಉಪಯೋಗಿಸಲು ಬೇಕಾದ ಮಂತ್ರ ಸಮೂಹಕ್ಕೆ ಯಜುರ್ವೇದವೆಂದು ಹೆಸರಿಸಿದರು. ಈ ಮಂತ್ರಗಳೆಲ್ಲವೂ ಛಂದೋಬದ್ಧವಾಗಿವೆ. ಯಜುರ್ವೇದದಲ್ಲಿ ಬರುವ ಕ್ರಿಯೆಗೆ ಸಂಬಂಧಿಸಿದ ಅನೇಕ ಮಂತ್ರಗಳಿಗೆ ಛಂದಸ್ಸು ಇಲ್ಲ. ಅವುಗಳಿಗೆ ಯಜುಶ್ಛಂದಃ ಎನ್ನುತ್ತಾರೆ. ಅಂಥ ಮಂತ್ರಗಳೇ ವಿಪುಲವಾಗಿರುವುದರಿಂದ ಆ ಸಮೂಹಕ್ಕೆ ಯಜುರ್ವೇದವೆಂದೇ ಹೆಸರಾಯಿತು. ಸಾಮಾನ್ಯವಾಗಿ ಯಜ್ಞದಲ್ಲಿ ಉದ್ಗಾತಾ ಎಂಬಾತ ದೇವತಾ ವಿಷಯಕವಾದ ಮಂತ್ರವನ್ನು ಗಾನರೂಪವಾಗಿ  ಹಾಡುತ್ತಾನೆ (ಸಾಮ), ಹೋತೃ ಎಂಬಾತ ಋಗ್ವೇದ ಸ್ತೋತ್ರವನ್ನು ನುಡಿಯುತ್ತಾನೆ. ಯಜುರ್ವೇದದಿಂದ ಅಧ್ವರ್ಯು ಹೋಮಾದಿಗಳನ್ನು ಮಾಡುತ್ತಾನೆ. ಹೀಗೆ ಯಜ್ಞಗಳೆಲ್ಲ ಮೂರೂ ವೇದಗಳ ಸಹಾಯದಿಂದ ನಡೆಯುತ್ತವೆ. 

	ಇದಲ್ಲದೆ ವ್ಯಕ್ತಿಗೆ ಬರುವ ಅನೇಕ ರೋಗಾದಿಗಳು, ದೇಶಕ್ಕೆ ಬರುವ ಕ್ಷಾಮಡಾಮರಾದಿಗಳು, ಶತ್ರುಭಯ ಮುಂತಾದವನ್ನು ನಿವಾರಿಸಲು ಅನೇಕ ಮಂತ್ರಗಳನ್ನು ರಚಿಸಿದರು. ಅವುಗಳ ಸಮೂಹವೇ ಅಥರ್ವವೇದ. ಹೀಗೆ ವೇದರಾಶಿ, ಈ ಹಿಂದೆ ಹೇಳಿದಂತೆ, ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಅದರಲ್ಲಿಯೂ ಯಜುರ್ವೇದದಲ್ಲಿ ಕೃಷ್ಣ, ಶುಕ್ಲ ಎಂಬ ಎರಡು ಭಾಗಗಳುಂಟು. ಕೃಷ್ಣಯಜುರ್ವೇದದಲ್ಲಿ ಸಂಹಿತಾ ಬ್ರಾಹ್ಮಣಗಳು  ಸಂಕೀರ್ಣವಾಗಿರುವುದರಿಂದ ಅದಕ್ಕೆ ಕೃಷ್ಣತ್ವ ಎಂಬ ಹೆಸರುಂಟು. ಶುಕ್ಲಯಜುರ್ವೇದದಲ್ಲಿ ಈ ಸಂಕೀರ್ಣತೆ ಇಲ್ಲದಿರುವುದ ರಿಂದ ಅದು ಶುದ್ಧ ಅಥವಾ ಶುಕ್ಲ. ಪ್ರತಿಯೊಂದು ವೇದದಲ್ಲಿಯೂ ಸಂಹಿತಾ, ಬ್ರಾಹ್ಮಣ, ಆರಣ್ಯಕಗಳೆಂಬ ಮೂರು ಭಾಗಗಳಿವೆ. ಸಂಹಿತೆ ಯೆಂದರೆ ಕೇವಲ ಮಂತ್ರಗಳು ಅಥವಾ ಮಂತ್ರಸಮೂಹ. ಆ ಮಂತ್ರಗಳ ವಿನಿಯೋಗ, ಪ್ರಯೋಜನ, ಫಲ, ವಿಧಿಯಲ್ಲಿ ರುಚಿ ಬರಿಸಲು ಕಥೆಗಳು-ಇವೆಲ್ಲವುಗಳ ಮೊತ್ತ ಬ್ರಾಹ್ಮಣಗಳು. ಪರಮಾತ್ಮಚಿಂತನೆಗೆ ಬೇಕಾದಂಥ ಕೆಲವು ವಿಷಯಗಳ ಸಂಗ್ರಹ ಆರಣ್ಯಕಗಳು: ಋಗ್ವೇದಕ್ಕೆ ಐತರೇಯ ಬ್ರಾಹ್ಮಣ, ಐತರೇಯ ಆರಣ್ಯಕಗಳು; ಶುಕ್ಲ ಯಜುರ್ವೇದಕ್ಕೆ ಶತಪಥ ಬ್ರಾಹ್ಮಣ ಆರಣ್ಯಕಗಳು; ಸಾಮವೇದಕ್ಕೆ ಕಾಂಡ ಮಹಾಬ್ರಾಹ್ಮಣ ಆರಣ್ಯಕಗಳು; ಅಥರ್ವ ವೇದಕ್ಕೆ ಗೋಪಥ ಬ್ರಾಹ್ಮಣ ಆರಣ್ಯಕಗಳು.

	ಮಹರ್ಷಿಗಳಿಗೆ ಕೇವಲ ಪ್ರಕೃತಿಯೂ ಪ್ರಕೃತಿಯಲ್ಲಿ ಸೇರಿಕೊಂಡಿರುವ ಅನೇಕಾನೇಕ ನಿಸರ್ಗಸಿದ್ಧವಾದ ವಿದ್ಯಮಾನಗಳೂ ದೇವತೆಗಳಾಗಿ ಕಂಡುವಷ್ಟೆ. ಅಷ್ಟಕ್ಕೇ ಅವರಿಗೆ ಸಮಾಧಾನವಾಗಲಿಲ್ಲ. ಇವೆಲ್ಲಕ್ಕೂ ಮೂಲಭೂತವಾದ ಚೈತನ್ಯವೊಂದಿರಬೇಕೆಂಬ ಭಾವನೆ ಸ್ವಭಾವಸಿದ್ಧವಾಗಿ ಮೂಡಿತು. ಅದರ ಬಗ್ಗೆ ದೀರ್ಘವಾಗಿ ಯೋಚಿಸಿ, ಚರ್ಚಿಸಿ, ತಮತಮಗೆ ತೋಚಿದಂತೆ, ಅನುಭವವಾದಂತೆ, ತಮ್ಮ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಈ ಭಾವನೆಗಳೇ ಇಂದು ಉಪನಿಷತ್ತುಗಳೆಂಬ ಹೆಸರಿನಲ್ಲಿ ಕಂಗೊಳಿಸುತ್ತವೆ. ಆ ಉತ್ಕøಷ್ಟ ಶಕ್ತಿಯ ಸ್ವರೂಪವೇನು? ಅದಕ್ಕೂ ನಮಗೂ ಪ್ರಪಂಚಕ್ಕೂ ಏನು ಸಂಬಂಧ, ಅದನ್ನು ತಿಳಿದುಕೊಂಡರೆ ಆಗುವ ಪ್ರಯೋಜನವೇನು ಎಂಬ ಜಟಿಲ ವಿಷಯಗಳನ್ನು ತಮ್ಮ ತೀಕ್ಷ್ಣಮತಿಯಿಂದ ವಿಚಾರಿಸಿ ಮಥನ ಮಾಡಿ ನಮಗೆ ಅನಘ್ರ್ಯ ನಿಧಿ ಪ್ರದಾನಿಸಿದ್ದಾರೆ ಪ್ರಾಚೀನ ಚಿಂತಕರು. ಇದನ್ನು ವೇದಾಂತ ಎಂದೂ ಹೇಳುವುದುಂಟು. ಅಂದರೆ ವೇದಗಳ ಕೊನೆ ಎಂದರ್ಥ. ವೇದಗಳೆಲ್ಲವೂ ವೇದಾಂತದಲ್ಲಿ  ಪರ್ಯವಸಾನವಾಗ ಬೇಕೆಂಬುದೇ ಮಹರ್ಷಿಗಳ ಉದ್ದೇಶ. ಪ್ರಕೃತಿಯಲ್ಲಿ ಕಾಣುವ ವಿದ್ಯಮಾನಗಳನ್ನೇ ದೇವತೆಗಳೆಂದು ಮೊದಲು ಕಂಡು, ಆ ಎಲ್ಲ ವಿದ್ಯಮಾನಗಳಲ್ಲಿಯೂ ದೇವತೆಗಳಲ್ಲಿಯೂ ಓತಪ್ರೋತವಾಗಿ ಹರಿಯುತ್ತಿರುವ ಒಂದು ಅನಂತಶಕ್ತಿಯನ್ನು ಅರಿಯುವುದೇ ಮಾನವನ ಧ್ಯೇಯವಾಗಿರಬೇಕೆಂಬುದು ಅವರ ಚಿಂತನೆ. 

	ಈ ದೃಷ್ಟಿಯಿಂದಲೇ ಒಂದೊಂದು ವೇದಕ್ಕೂ ಒಂದು ಅಥವಾ ಎರಡು ಉಪನಿಷತ್ತುಗಳನ್ನು ಜೋಡಿಸಿದ್ದಾರೆ: ಋಗ್ವೇದಕ್ಕೆ ಐತರೇಯ, ಕೌಷಿಕ ಉಪನಿಷತ್ತುಗಳು; ಶುಕ್ಲಕ್ಕೆ ಬೃಹದಾರಣ್ಯಕ, ಈಶ ಉಪನಿಷತ್ತುಗಳು; ಸಾಮಕ್ಕೆ ಛಾಂದೋಗ್ಯ, ಕೇನ ಉಪನಿಷತ್ತುಗಳು; ಮತ್ತು ಅಥರ್ವಕ್ಕೆ ಪ್ರಶ್ನ, ಮುಂಡಕ ಹಾಗೂ ಮಾಂಡೂಕ್ಯ ಉಪನಿಷತ್ತುಗಳು.

	ಉಪನಿಷತ್ತುಗಳಲ್ಲಿ ಮಹರ್ಷಿಗಳ ಪರಿಪಕ್ವ ಮನಸ್ಸಿನ ಉನ್ನತೋನ್ನತ ಉದಾತ್ತ ಭಾವನೆಗಳನ್ನು ಅರಿಯಬಹುದು. ಈ ಕಾರಣದಿಂದಲೇ ಉಪನಿಷತ್ತುಗಳ ಪರ್ಷಿಯನ್ ಅನುವಾದವನ್ನು ಓದಿದ ಮಹಾ ಮೇಧಾವಿ ಚಿಂತನಶೀಲ ವ್ಯಕ್ತಿ ಷೊಪೆನ್ ಹೋವರ್ (1788-1860) ಎಂಬ ಜರ್ಮನ್ ತತ್ತ್ವಜ್ಞಾನಿ ಉಪನಿಷತ್ತುಗಳು ನನ್ನ ಬಾಳ್ವೆಗೆ ಶಾಂತಿದಾಯಕವಾಗಿವೆ-ಸಾಯುವಾಗಲೂ ಸತ್ತಮೇಲೂ ಹಾಗೆಯೇಎಂದು ಉದ್ಘೋಷಿಸಿದ್ದಾನೆ. 

	ಇಂಥ ವೇದೋಪನಿಷತ್ತುಗಳನ್ನು ಆದರಿಸಿ ಗೌರವಿಸಿ ಅತ್ಯಂತ ಉನ್ನತಸ್ಥಾನದಲ್ಲಿಟ್ಟಿರುವುದು ಸಹಜವೇ. ಅಪೌರುಷೇಯಗಳೆಂದು (ಪುರುಷರಚಿತವಲ್ಲ ಎಂಬ ಅರ್ಥದಲ್ಲಿ) ಹೇಳುವುದುಂಟು. ಅದು ಕೇವಲ ವೇದೋಪನಿಷತ್ತುಗಳ ಮೇಲಿನ ಅಪಾರ ಗೌರವದಿಂದ ಹೇಳುವ ಮಾತೇ ವಿನಾ ಯಥಾರ್ಥವಲ್ಲ. ಇವು ದೇವಸದೃಶ ಮಹರ್ಷಿರಚಿತ ವೆಂದಿಟ್ಟುಕೊಂಡರೆ ಸಾಕು, ಇವುಗಳ ಗೌರವಕ್ಕೆ ಯಾವ ಚ್ಯುತಿಯೂ ಬರಲಾರದು.	
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		
			(ಆರ್.ಕೆ.ಎಸ್.)